ನಮ್ಮನೇಲಿ ಇವತ್ತು ಕ್ಷುಲ್ಲಕ ಎನ್ನಬಹುದಾದ ಪುಟಾಣಿ ಘಟನೆಯೊಂದು ನಡೆಯಿತು. ಆಮೇಲೆ ಯೋಚಿಸುತ್ತ ಕೆಲವು ಕುತೂಹಲಕಾರಿ ವಿಚಾರಗಳು ಹೊಳೆದವು. ಅದನ್ನೇ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ.
ನಮ್ಮ ಮನೆಯಲ್ಲಿ ಈಗ ಸದ್ಯಕ್ಕೆ, ತಾತ್ಕಾಲಿಕವಾಗಿ ಒಂದು ಗಣಪತಿ ಪ್ರತಿಮೆ ಇದೆ. ಕಲ್ಲಿನದು. ಸುಮಾರು 25 ಕೆ.ಜಿ. ಇರಬಹುದು. ಯಾವುದೋ ಕಾರ್ಯಕ್ರಮಕ್ಕೆ ಅದನ್ನು ಕಾರಿನಲ್ಲಿ ಹೊತ್ತೊಯ್ದಿದ್ದೆವು. ವಾಪಾಸು ಬಂದಮೇಲೆ ಅದನ್ನು ಒಬ್ಬನೇ ಎತ್ತಲು ಧೈರ್ಯ ಸಾಲದೇ ಕಾರಿನ ಡಿಕ್ಕಿಯಲ್ಲೇ ಬಿಟ್ಟಿದ್ದೆ. ಇಂದು ಬೆಳಿಗ್ಗೆ ನಮ್ಮ ತೋಟಿಗ (gardener) ವೀರಭದ್ರಪ್ಪ ಅನಾಯಾಸವಾಗಿ ಸಿಕ್ಕಿದ್ದರಿಂದ ಅದನ್ನು ಎತ್ತಿ ಮನೆಯೊಳಗೆ ಇಟ್ಟು ಕೊಡುವಂತೆ ಅವನನ್ನು ಕೋರಿದೆವು. ಅವನು ತತ್-ಕ್ಷಣವೇ ಲಗುಬಗೆಯಿಂದ ಚಪ್ಪಲಿಗಳನ್ನು ಒಂದೆಡೆ ಬಿಟ್ಟು, ಡಿಕ್ಕಿ ತೆರೆದು ಕಾಯುತ್ತಿದ್ದ ನನ್ನ ಬಳಿ ಬಂದ. ಬಂದವನೇ ಒಮ್ಮೆ ಗಣಪತಿಯನ್ನು ಕಣ್ಣಿಗೊತ್ತಿಕೊಂಡು, ‘ಬಾರಪ್ಪ ಗಣೇಶ.. ‘ ಎನ್ನುತ್ತಾ ಪ್ರತಿಮೆಯನ್ನು ಹೆಗಲ ಮೇಲೆ ಏರಿಸಿ ಒಳನಡೆದ. ಅದೇಕೋ ಅಪ್ರಯತ್ನವಾಗಿ ನನ್ನ ಮುಖದ ಮೇಲೆ ಮುಗುಳ್ನಗೆ ಮೂಡಿತು. ನಾನು ಡಿಕ್ಕಿ ಮುಚ್ಚಿ, ಕಾರು ಹತ್ತಿ, ಆಫೀಸಿನ ಕಡೆಗೆ ಚಲಾಯಿಸತೊಡಗಿದೆ. ನಡೆದ ಘಟನೆ ಇಷ್ಟೇ. ಆದರೆ ಅದೇಕೆ ನನ್ನಲ್ಲಿ ಒಂದು ನವಿರಾದ ಭಾವನೆ ಮೂಡಿಸಿತು ಎನ್ನುವ ಯೋಚನೆ ಮುಂದುವರೆಯಿತು.
ನನ್ನ ಪಾಲಿಗೆ ಆ ಗಣಪತಿ ಮೂರ್ತಿ ಒಂದು ಭಾರವಾದ ಕಲ್ಲಾಗಿತ್ತು ಅಷ್ಟೇ. ಅದನ್ನು ಸಾಗಿಸುವುದು ನನ್ನ ಮೈಮನಗಳೆರೆಡಕ್ಕೂ ಒಂದು ಭಾರವಾದ ಕೆಲಸವಾಗಿತ್ತು. ಅಂದರೆ ಚಿಂತೆ ಮಾಡುವಷ್ಟಲ್ಲ. ಸುಮ್ಮನೆ ಒಂದು chore ಅನ್ನುತ್ತಾರಲ್ಲ ಹಾಗೆ. ವೀರಭಧ್ರಪ್ಪನಾದರೋ ಅದನ್ನು ಒಂದು ಪವಿತ್ರ ಜವಾಬ್ದಾರಿ ಅಂತ ಪರಿಗಣಿಸಿದ. ಅಂದರೆ ತುಂಬಾ ಗಂಭೀರವಾಗಿಯೂ ಅಲ್ಲ. ಸುಮ್ಮನೆ ಸರಳವಾಗಿ. ಅವನು ಎತ್ತಿದ ಭಾರಕ್ಕೊಂದು ಚಿಕ್ಕ ಅರ್ಥ ಇತ್ತು. ನನ್ನ ಪಾಲಿಗೆ ಅದು ಇರಲಿಲ್ಲ. ಅಷ್ಟೇ ವ್ಯತ್ಯಾಸ.
ನಾವು ಈ ಘಟನೆಯ ಪರಿಧಿಯನ್ನು ಎಷ್ಟೇ ವಿಸ್ತರಿಸಿಕೊಂಡು, ನನ್ನ ವಿಚಾರವಾದಿತನವನ್ನೂ, ಅವನ ವಿಮರ್ಶೆ ಮಾಡದ ಬುದ್ಧಿಯನ್ನೂ ವಿಶ್ಲೇಷಿಸಿದರೂ, ಅವನಿಗೆ ದಕ್ಕಿದ್ದು ನನಗೆ ದಕ್ಕಲಿಲ್ಲ ಎನ್ನುವುದಂತೂ ಸತ್ಯ. ಇದು ಏಕೆ ಹೀಗೆ?
ನನಗನ್ನಿಸುವುದು ಇಷ್ಟು. ನಮ್ಮ ಬದುಕಿನ ತಾತ್ಪರ್ಯವಿರುವುದು ನಾವು ಅನುಭವಿಸಿದ ಅರ್ಥಪೂರ್ಣ ಕ್ಷಣಗಳ ಒಟ್ಟು ಮೊತ್ತದಲ್ಲಿ. ನಮ್ಮ ಅರಿವಿನ ಹರವು ಎಷ್ಟು ದೊಡ್ಡದಾಗುತ್ತ ಹೋಗುತ್ತದೋ, ಅಷ್ಟೇ ದೊಡ್ಡ ಅರ್ಥಹೀನತೆಯ ಕಂದಕವೊಂದು ನಮ್ಮ ಎದಿರು ತೆರೆದುಕೊಳ್ಳುತ್ತಾ ಹೋಗುತ್ತದೆ. ಹಾಗೆಂದೇ ಅರಿವಿನ ಬಾಬತ್ತು ಒಂದು ತ್ರಾಸದಾಯಕವಾದ ಚೌಕಾಸಿ ವ್ಯವಹಾರ. ಅಥವಾ ಅನುಸಂಧಾನ ಎನ್ನಿ. ಅರಿವು - ಅರ್ಥಗಳ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ? ಇದು ಯಕ್ಷಪ್ರಶ್ನೆ. ವೀರಭದ್ರಪ್ಪ ಇದರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಂಡಿರುವುದಿಲ್ಲ ಬಿಡಿ!
-ಪವಮಾನ (July 18, 2017)
Comments
Post a Comment