ನಮ್ಮನೇಲಿ ಇವತ್ತು ಕ್ಷುಲ್ಲಕ ಎನ್ನಬಹುದಾದ ಪುಟಾಣಿ ಘಟನೆಯೊಂದು ನಡೆಯಿತು. ಆಮೇಲೆ ಯೋಚಿಸುತ್ತ ಕೆಲವು ಕುತೂಹಲಕಾರಿ ವಿಚಾರಗಳು ಹೊಳೆದವು. ಅದನ್ನೇ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ. ನಮ್ಮ ಮನೆಯಲ್ಲಿ ಈಗ ಸದ್ಯಕ್ಕೆ, ತಾತ್ಕಾಲಿಕವಾಗಿ ಒಂದು ಗಣಪತಿ ಪ್ರತಿಮೆ ಇದೆ. ಕಲ್ಲಿನದು. ಸುಮಾರು 25 ಕೆ.ಜಿ. ಇರಬಹುದು. ಯಾವುದೋ ಕಾರ್ಯಕ್ರಮಕ್ಕೆ ಅದನ್ನು ಕಾರಿನಲ್ಲಿ ಹೊತ್ತೊಯ್ದಿದ್ದೆವು. ವಾಪಾಸು ಬಂದಮೇಲೆ ಅದನ್ನು ಒಬ್ಬನೇ ಎತ್ತಲು ಧೈರ್ಯ ಸಾಲದೇ ಕಾರಿನ ಡಿಕ್ಕಿಯಲ್ಲೇ ಬಿಟ್ಟಿದ್ದೆ. ಇಂದು ಬೆಳಿಗ್ಗೆ ನಮ್ಮ ತೋಟಿಗ (gardener) ವೀರಭದ್ರಪ್ಪ ಅನಾಯಾಸವಾಗಿ ಸಿಕ್ಕಿದ್ದರಿಂದ ಅದನ್ನು ಎತ್ತಿ ಮನೆಯೊಳಗೆ ಇಟ್ಟು ಕೊಡುವಂತೆ ಅವನನ್ನು ಕೋರಿದೆವು. ಅವನು ತತ್-ಕ್ಷಣವೇ ಲಗುಬಗೆಯಿಂದ ಚಪ್ಪಲಿಗಳನ್ನು ಒಂದೆಡೆ ಬಿಟ್ಟು, ಡಿಕ್ಕಿ ತೆರೆದು ಕಾಯುತ್ತಿದ್ದ ನನ್ನ ಬಳಿ ಬಂದ. ಬಂದವನೇ ಒಮ್ಮೆ ಗಣಪತಿಯನ್ನು ಕಣ್ಣಿಗೊತ್ತಿಕೊಂಡು, ‘ಬಾರಪ್ಪ ಗಣೇಶ.. ‘ ಎನ್ನುತ್ತಾ ಪ್ರತಿಮೆಯನ್ನು ಹೆಗಲ ಮೇಲೆ ಏರಿಸಿ ಒಳನಡೆದ. ಅದೇಕೋ ಅಪ್ರಯತ್ನವಾಗಿ ನನ್ನ ಮುಖದ ಮೇಲೆ ಮುಗುಳ್ನಗೆ ಮೂಡಿತು. ನಾನು ಡಿಕ್ಕಿ ಮುಚ್ಚಿ, ಕಾರು ಹತ್ತಿ, ಆಫೀಸಿನ ಕಡೆಗೆ ಚಲಾಯಿಸತೊಡಗಿದೆ. ನಡೆದ ಘಟನೆ ಇಷ್ಟೇ. ಆದರೆ ಅದೇಕೆ ನನ್ನಲ್ಲಿ ಒಂದು ನವಿರಾದ ಭಾವನೆ ಮೂಡಿಸಿತು ಎನ್ನುವ ಯೋಚನೆ ಮುಂದುವರೆಯಿತು. ನನ್ನ ಪಾಲಿಗೆ ಆ ಗಣಪತಿ ಮೂರ್ತಿ ಒಂದು ಭಾರವಾದ ಕಲ್ಲಾಗಿತ್ತು ಅಷ್ಟೇ. ಅದನ್ನು ಸಾಗಿಸುವುದು ...